ಥೈಮಾಲ್ -
ರಾಸಾಯನಿಕ ಸೂತ್ರ ಇರುವಂಥ ಸ್ಫಟಿಕಾಕಾರದ ವರ್ಣರಹಿತ ಫೀನಾಲ್, ನೈಸರ್ಗಿಕವಾಗಿ ಬೆಳೆಯುವ ಥೈಮಸ್ ವಲ್ಗ್ಯಾರಿಸ್, ಮೊನಾರ್ಡ ಪಂಕ್ಟೇಟ, ಟೈಕೋಟಿಸ್ ಆ್ಯಜೋವನ್ ಹಾಗೂ ಟ್ರ್ಯಾಕಿಸ್ಪರ್ಮಮ್ ಆ್ಯಮಿ ಎಂಬ ಜಾತಿಯ ಸಸ್ಯಮೂಲಗಳಿಂದ ದೊರೆಯುವ ಥೈಮ್ ತೈಲದಲ್ಲಿ ಥೈಮಲ್ ಇರುವುದು. ಈ ಸ್ಯಸಗಳ ಬೀಜ ಹಾಗೂ ಬೇರುಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ ಹಬೆ ಬಟ್ಟೀಕರಿಸಿ ಹೈಡ್ರಾಕ್ಸೈಡ್ (10%) ಜೊತೆ ಚೆನ್ನಾಗಿ ಕುಲಕಿಸಿ ಜಲೀಯ ಭಾಗವನ್ನು ಬೇರ್ಪಡಿಸಿ ಅದನ್ನು ಆಮ್ಲೀಕರಿಸಿದರೆ ಥೈಮಲ್ ಪ್ರಕ್ಷೇಪಿಸುವುದು. ಚೆನ್ನಾಗಿ ಶೀತಲಗೊಳಿಸಿ ಥೈಮಲ್ ಘನೀಕರಿಸಿದರೆ ಬಳಿಕ ಅದನ್ನು ಸೋಸಿ ಶೇಖರಿಸಿ ಇಡಲಾಗುವುದು. ಇದು ನೈಸರ್ಗಿಕವಾಗಿ ದೊರೆಯುವ ಫೀನಾಲುಗಳಲ್ಲಿ ಅತ್ಯಮೂಲ್ಯವಾದ ಮಿಂಟ್ ಜಾತಿಗೆ ಸೇರಿರುವುದರಿಂದ ಇದನ್ನು ಔಷಧಿ ಹಾಗೂ ಸುಗಂಧದ್ರವ್ಯಗಳ ಉದ್ದಿಮೆಗಳಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಸದ್ಯ ಭಾರತದಲ್ಲಿ ಉತ್ಪಾದಿಸುವ ಥೈಮಲ್ ವಿವಿಧ ಉದ್ದಿಮೆಗಳ ಬೇಡಿಕೆಯನ್ನು ಪೂರೈಸಲಾಗದ ಕಾರಣ ಕೆಲ ಭಾಗವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಅಧಿಕವಾಗಿ ಬೆಳೆಯುವ ಟ್ರ್ಯಾಕಿಸರ್ಮಮ್ ಆ್ಯಮಿಜಾತಿಯ ಅಜವೇನ್ ಬೀಜಗಳಿಂದ ಸಾಕಷ್ಟು ಥೈಮ್ ತೈಲ ದೊರಕಿಸಿ ಥೈಮಲ್ ಉತ್ಪಾದಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾಗಿದೆ. ನೈಸರ್ಗಿಕ ಮೂಲಗಳಿಂದಲ್ಲದೆ ಮೆಟಕ್ರಿಸಾಲ್ ಹಾಗೂ ಐಸೊಪ್ರೊಪ್ಯಾನಲ್ ಇವುಗಳ ರಾಸಾಯನಿಕ ಸಂಯೋಗದಿಂದ ಕೂಡ ಥೈಮಲನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. 

	ಥೈಮಲ್ ವರ್ಣರಹಿತ ಸ್ಫಟಿಕಾಕಾರದ ವಸ್ತು. ಇದರ ಅಣುಸೂತ್ರ  ಹಾಗೂ ರಚನಾ ಸೂತ್ರ 2-ಐಸೊಪ್ರೊಪೈಲ್-5-ಮೀಥೈಲ್ ಫೀನಾಲ್. ಇದರ ದ್ರವನ ಬಿಂದು 510ಅ ಹಾಗೂ ಕುದಿಬಿಂದು 2320ಅ. ಇದು ನೀರಲ್ಲಿ ಅತಿ ಸ್ಪಲ್ಪ ಪ್ರಮಾಣದಲ್ಲಿ ಬೆರೆಯುವುದು. ಆದರೆ ಆಲ್ಕೊಹಾಲ್, ಈಥರ್, ಕ್ಲೋರೋಫಾರ್ಮ್ ಹಾಗೂ ಬೆನ್‍ಜಿûೀನ್ ಜೊತೆ ಚೆನ್ನಾಗಿ ಬೆರೆಯುವುದು. ಹೆಚ್ಚಿನ ಪ್ರಮಾಣದಲ್ಲಿ ಥೈಮಾಲನ್ನು ಸೇವಿಸಿದರೆ ವಾಂತಿ, ಭೇದಿಗಳಾಗಬಹುದು ಮತ್ತು ಕೆಲಸಲ ಮೂರ್ಛೆಯೂ ಬರಬಹುದು. 

	ಮಹತ್ತ್ವದ ರಾಸಾಯನಿಕ ಕ್ರಿಯೆಗಳು: ಸೋಡಿಯಮ್ ಹೈಡ್ರಾಕ್ಸೈಡಿನೊಡನೆ ಥೈಮಲ್ ವರ್ತಿಸಿ ಅದರ ಸೋಡಿಯಮ್ ಲವಣವನ್ನು ಕೊಡುತ್ತದೆ. P2S5 ಜೊತೆ ಇದನ್ನು ಕುದಿಬಿಂದುವಿನವರೆಗೆ ಕಾಸಿದರೆ ಪ್ಯಾರ ಸೈಮೀನ್ ಎಂಬ ಪದಾರ್ಥ ಉಂಟಾಗುತ್ತದೆ. P8ಔ5 ಜೊತೆ ಕಾಸಿದರೆ ಇದು ಮೆಟಕ್ರಿಸಾಲ್ ಮತ್ತು ಪ್ರಾಪಿಲಿನ್ ಎಂಬ ಉಪಯುಕ್ತ ರಾಸಾಯನಿಕಗಳನ್ನು ಕೊಡುತ್ತದೆ. ಇದರ ಆಲ್ಕೊಹಾಲ್ ದ್ರಾವಣವನ್ನು ಫೆರಿಕ್ ಕ್ಲೋರೈಡಿನೊಡನೆ ಕಾಸಿದರೆ ಉತ್ಕರ್ಷಣೆಯಾಗಿ ಡೈಥೈಮಾಲ್ ಉಂಟಾಗುವುದು. ಇದನ್ನು ತೀವ್ರ ಉತ್ಕರ್ಷಣೆಗೆ ಒಳಪಡಿಸಿದರೆ ಥೈಮೊಕ್ವಿನೋನ್ ಎಂಬ ಪದಾರ್ಥ ಫಲಿಸುತ್ತದೆ. ವೇಗವರ್ಧಿತ ಹೈಡ್ರೊಜನೀಕರಣ ಮಾಡಿದರೆ ಇದು ಮಿಂಟ್ ಜಾತಿಗೆ ಸೇರಿದ ಮೆಂಥಾಲ್ ಎಂಬ ಉಪಯುಕ್ತ ವಸ್ತುವನ್ನು ಕೊಡುವುದು. ಆಯೊಡೀನ್ ಹಾಗೂ ಕಾಸ್ಟಿಕ್ ಸೋಡ ಮಿಶ್ರಣಜತೆ ಕಾಸಿದರೆ ಇದು ಡೈಅಯೊಡೋ ಡೈಥೈಮಾಲ್ ಎಂಬ ವಸ್ತುವನ್ನು ನೀಡುತ್ತದೆ. ಇದನ್ನು ಶಸ್ತ್ರಚಿಕಿತ್ಸೆಯಲ್ಲಿ ಆ್ಯರಿಸ್ಟಾಲ್ ಎಂಬ ಹೆಸರಿನಿಂದ ಪೂತಿನಾಶಕವಾಗಿ ಉಪಯೋಗಿಸಲಾಗುತ್ತದೆ. ಥೈಮಾಲ್ ಬ್ಲ್ಯೂ ಎಂಬ ಇದರ ಇನ್ನೊಂದು ಸಂಯುಕ್ತವನ್ನು ಆಮ್ಲಮಿತಿ ಹಾಗೂ ಕ್ಷಾರಮಿತಿ ಪ್ರಯೋಗಗಳಲ್ಲಿ ಸೂಚಕವಾಗಿ (ಇಂಡಿಕೇಟರ್) ಉಪಯೋಗಿಸಲಾಗುವುದು.
(ಸಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ